ಸಾಲೆತೊರೆ, ಬಿ ಎ
	1900-63. ಕನ್ನಡನಾಡಿನ ಹೆಸರಾಂತ ಇತಿಹಾಸ ವಿದ್ವಾಂಸರು. ಕನ್ನಡ ನಾಡಿನಲ್ಲಿ ಮಾತ್ರವಲ್ಲದೆ ಭಾರತದ ವಿವಿಧ ಪ್ರಾಂತಗಳಲ್ಲೂ ಮತ್ತು ಭಾರತ ಸರ್ಕಾರದ ಪ್ರಾಚೀನ ಐತಿಹಾಸಿಕ ದಾಖಲೆಗಳ ಸಂಗ್ರಹಾಲಯದಲ್ಲೂ ಅಮೋಘವಾದ ಸೇವೆಸಲ್ಲಿಸಿದರು. ಭಾಸ್ಕರ ಆನಂದ ಸಾಲೆತೊರೆ ಎಂಬುದು ಇವರ ಪೂರ್ಣ ಹೆಸರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಸಾಲೆತೊರೆ ಗ್ರಾಮದಲ್ಲಿ 1900 ಅಕ್ಟೋಬರ್ 11ರಂದು ಜನಿಸಿದರು. ಫಾದರ್ ಹೆರಾಸರ ಆಶ್ರಯದಲ್ಲಿ ಶಿಕ್ಷಣ ಮುಗಿಸಿದ ಅನಂತರ ವಿಜಯನಗರ ಸಾಮ್ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ಜೀವನ ಎಂಬ ಪ್ರೌಢ ಪ್ರಬಂಧವನ್ನು ಲಂಡನ್ ವಿಶ್ವವಿದ್ಯಾಲಯಕ್ಕೆ ಒಪ್ಪಿಸಿ 1931ರಲ್ಲಿ ಪಿಎಚ್.ಡಿ ಪದವಿ ಪಡೆದರು. ಇವರಿಗೆ ಕನ್ನಡವಲ್ಲದೆ ಸಂಸ್ಕøತ, ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳಲ್ಲಿ ಅಪಾರ ಪಾಂಡಿತ್ಯವಿತ್ತು. 1936ರಲ್ಲಿ ಇವರು ಪುಣೆಯ ಸರ್ ಪರಶುರಾಮಭಾವು ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದರು. ಅನಂತರ ಅಲಹಾಬಾದ್ ವಿಶ್ವವಿದ್ಯಾಲಯದಲ್ಲೂ ಪ್ರಾಧ್ಯಾಪಕ ವೃತ್ತಿ ನಿರ್ವಹಿಸಿದರು. ಇವರ ವಿದ್ವತ್ತನ್ನು ಗಮನಿಸಿದ ಭಾರತ ಸರ್ಕಾರ ಇವರನ್ನು ಐತಿಹಾಸಿಕ ದಾಖಲೆಗಳ ಸಂಗ್ರಹಾಲಯದ ನಿರ್ದೇಶಕರನ್ನಾಗಿ ನೇಮಿಸಿತು. ಕಡೆಯವರೆಗೆ ಆ ಹುದ್ದೆಯನ್ನು ನಿರ್ವಹಿಸಿ ನಿವೃತ್ತಿಹೊಂದಿದರು. ಅನಂತರ ಇವರು ಕರ್ನಾಟಕ ವಿಶ್ವವಿದ್ಯಾಲಯದ ಭಾರತೀಯ ಇತಿಹಾಸ ಮತ್ತು ಸಂಸ್ಕøತಿ ವಿಭಾಗದ ಪ್ರಾಧ್ಯಾಪಕರಾಗಿಯೂ ಕನ್ನಡ ಸಂಶೋಧನ ಸಂಸ್ಥೆಯ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದರು.

	ಇವರು ಪ್ರಥಮ ದರ್ಜೆಯ ಸಂಶೋಧಕರು, ಇತಿಹಾಸಜ್ಞರು. ಇವರು ಅನೇಕ ವಿದ್ವತ್ಪೂರ್ಣ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಸೋಷಿಯಲ್ ಅಂಡ್ ಪೊಲಿಟಿಕಲ್ ಲೈಫ್ ಅಂಡರ್ ವಿಜಯನಗರ ಎಂಪೈರ್, ಏನ್ಸಿಯಂಟ್ ಕರ್ನಾಟಕ, ಸಂಪುಟ1-ಹಿಸ್ಟರಿ ಆಫ್ ದಿ ತುಳುವ, ಇಂಡಿಯಾಸ್ ಡಿಪ್ಲೊಮ್ಯಾಟಿಕ್ ರಿಲೇಷನ್ಸ್ ವಿತ್ ದಿ ವೆಸ್ಟ್, ಏನ್ಸಿಯಂಟ್ ಇಂಡಿಯನ್ ಪೊಲಿಟಿಕಲ್ ಥಾಟ್ ಅಂಡ್ ಇನ್‍ಸ್ಟಿಟ್ಯೂಷನ್ಸ್, ಮಿಡೀವಲ್ ಜೈನಿಸಮ್, ವೈಲ್ಡ್ ಟ್ರೈಬ್ಸ್ ಇನ್ ಇಂಡಿಯನ್ ಹಿಸ್ಟರಿ, ದಿ ಮರಾಠ ಡೊಮಿನಿಯನ್ ಇನ್ ಕರ್ನಾಟಕ ಮುಂತಾದ ಗ್ರಂಥಗಳು ಇಂಗ್ಲಿಷ್‍ನಲ್ಲಿವೆ. ವರ್ಟ ಡೆರ್ ಉಸ್ಟಿಷೆನ್ ಲೆ ಹ್ರೆನ್ ಫುರ್ ಡೈ ಲೂಸಂಗ್ ಎಂಬ ಗ್ರಂಥ ಜರ್ಮನ್ ಭಾಷೆಯಲ್ಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಕನ್ನಡ ನಾಡಿನ ಚರಿತ್ರೆಯ ಒಂದನೆಯ ಸಂಪುಟವನ್ನು ಇಲ್ಲಿ ಹೆಸರಿಸಬಹುದಾಗಿದೆ. ಇವುಗಳ ಜೊತೆಗೆ ಇತಿಹಾಸ, ಕಲೆ, ಸಾಹಿತ್ಯ ಕುರಿತು ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ.

	ಸಾಲೆತೊರೆಯವರು ಹಂಪೆಯಲ್ಲಿ ವಿಜಯನಗರ ಸಾಮ್ರಾಜ್ಯದ 6ನೆಯ ಶತಮಾನದ ನೆನಪಿಗಾಗಿ ನಡೆದ ಮಹೋತ್ಸವದಲ್ಲಿ ಭಾಗವಹಿಸಿದ್ದರು (1936). 1957ರಲ್ಲಿ ಧಾರವಾಡದಲ್ಲಿ ನಡೆದ ಇತಿಹಾಸ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇವರು 1963 ಡಿಸೆಂಬರ್ 18ರಂದು ನಿಧನಹೊಂದಿದರು.	                    
            (ಬಿ.ಕೆ.ಜಿ.; ಟಿ.ಎಸ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ